FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, April 14, 2015

ವಿಷು ಕಣಿ
           ಬ್ಲಾಗಿನ ಸಮಸ್ತ ವೀಕ್ಷಕರಿಗೂ ವಿಷುವ ಹಬ್ಬದ ಹಾರ್ದಿಕ ಶುಭಾಶಯಗಳು. ಹಿಂದೂ ಹಬ್ಬಗಳಲ್ಲಿ ಯುಗಾದಿ ಮತ್ತು ವಿಷುವಿಗೆ ವಿಶೇಷ ಪ್ರಾಧಾನ್ಯವಿದೆ. ಇವುಗಳೆರಡೂ ಹೊಸವರ್ಷಾಚರಣೆಯ ಹಬ್ಬಗಳಾಗಿವೆ. ಚೈತ್ರ ಮಾಸದಿಂದ ಫಾಲ್ಗುಣ ಮಾಸದವರೆಗಿನ ಚಾಂದ್ರಮಾನ ವರ್ಷದಲ್ಲಿ ಚೈತ್ರ ಶುದ್ಧ ಪಾಡ್ಯವು ಹೊಸವರ್ಷಾರಂಭ ದಿನ - ಚಾಂದ್ರಮಾನ ಯುಗಾದಿ. ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುವ ಸಂಕ್ರಮಣ ದಿನ ವಿಷು ಸಂಕ್ರಮಣ ಅಥವಾ ಸೌರಮಾನ ಯುಗಾದಿ. ಮೇಷ ಸಂಕ್ರಮಣದ ಮರುದಿನ ಹೊಸ ವರ್ಷಾರಂಭ. ಇದು ಸೌರ ಯುಗಾದಿ. ಸೌರ ಯುಗಾದಿಯಾದ ವಿಷು ದಿನವನ್ನು  ಕೇರಳದಾದ್ಯಂತ ಹಬ್ಬವಾಗಿ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸೌರ ಯುಗಾದಿಯನ್ನು ಹೊಸವರ್ಷದ ಆದಿ ದಿನವೆಂದು ಆಚರಿಸಲಾಗುತ್ತದೆ. ದಕ್ಷಿಣ ಕೇರಳದಲ್ಲಿ ವಿಷು ಹಬ್ಬವನ್ನು ಕಣಿ ಕಾಣುವ ಹಬ್ಬವಾಗಿ ಆಚರಿಸುತ್ತಾರೆ . ವಿಷು ಕಣಿ ಕಾಣುವುದು ಎಂದರೆ ಹೊಸ ವರ್ಷದಲ್ಲಿ ನಮಗೆ ಶ್ರೇಯಸ್ಸಾಗಲೆಂದು ದೇವರಲ್ಲಿ ಪ್ರಾರ್ಥಿಸುವುದು ಎಂದಾಗಿದೆ. 
         ಮೇಷ ಮಾಸದ ಮೊದಲ ದಿನವೇ ವಿಷುಕಣಿ . ಇದರ ಮೊದಲಿನ ದಿನ ರಾತ್ರಿ ದೇವರ ಕೋಣೆಯಲ್ಲಿ ಕಣಿ ಕಾಣಲು ಇಡಬೇಕಾದ ವಸ್ತುಗಳನ್ನು ಸಿದ್ಧಗೊಳಿಸುತ್ತಾರೆ. ಕಣಿ ಕಾಣುವ ವಸ್ತುಗಳಾಗಿ ಫಲವಸ್ತುಗಳು. ನವ ಧಾನ್ಯಗಳು, ನೂತನ ವಸ್ತ್ರಗಳು , ಧನ ಕನಕಗಳು ಇತ್ಯಾದಿಗಳನ್ನು ಓರಣಗೊಳಿಸಿಟ್ಟು ಉರುಳಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ , ತೆಂಗಿನ ಕಾಯಿ ಮತ್ತು ಕನ್ನಡಿಯನ್ನಿರಿಸುತ್ತಾರೆ. ಕಣಿ ಕಾಣುವ ದಿನ ಪ್ರಾತಃ ಕಾಲ ಬೇಗನೆ ಎದ್ದು ಸ್ನಾನ ಮಾಡಿ ನೂತನ ವಸ್ತ್ರ ಧರಿಸಿ ಗುರು ಹಿರಿಯರಿಗೆ ವಂದಿಸಿ ಕಣಿ ಕಾಣುವುದಾಗಿದೆ. ಕಣಿ ಕಂಡ  ಬಳಿಕ ಕನ್ನಡಿಯಲ್ಲಿ ಮುಖ ನೋಡಬೇಕು. ಕನ್ನಡಿಯಲ್ಲಿ ಮುಖ ನೋಡುವುದರಿಂದ ಆಯುಷ್ಯವು ಹೆಚ್ಚುತ್ತದೆ. ಸಂಪತ್ತು ಉಂಟಾಗುತ್ತದೆ. ಪಾಪವನ್ನು ಹೋಗಲಾಡಿಸುತ್ತದೆ. ನಮ್ಮನ್ನು ಇಡೀ ವರ್ಷ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಎದುರಾಗುವ ತೊಡಕುಗಳನ್ನೆಲ್ಲಾ ನಿವಾರಣೆ ಮಾಡಬೇಕೆಂದು ದೇವರಲ್ಲಿ ಪ್ರಾರ್ಥಿಸುವುದೇ ವಿಷು ಕಣಿ ಕಾಣುವ ಉದ್ದೇಶವಾಗಿದೆ. 
                                                               - ಸಂಗ್ರಹ 

No comments:

Post a Comment