FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, September 29, 2014

PERFORMANCE OF PULIKKALI DURING THE FESTIVAL OF NAVARATHRI 2014

ನಮ್ಮ ಶಾಲೆಯಲ್ಲಿ ನವರಾತ್ರೆಯ ಸಂದರ್ಭದಲ್ಲಿ  ಪ್ರದರ್ಶಿಸಲ್ಪಟ್ಟ ಹುಲಿವೇಷ .
FOR MORE IMAGES CLICK HERE

Saturday, September 27, 2014

Sakshara Navollasa Camp 2014

ಸಾಕ್ಷರ ನವೋಲ್ಲಾಸ ಶಿಬಿರ 2014:
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಇರುವ ಸಾಕ್ಷರ ನವೋಲ್ಲಾಸ -2014 ಶಿಬಿರವು ಇಂದು ನಮ್ಮ ಶಾಲೆಯಲ್ಲಿ ನಡೆಯಿತು. ಪುತ್ತಿಗೆ ಪಂಚಾಯತು ಸದಸ್ಯೆ ಕುಮಾರಿ ವಸಂತಿ  ಅವರು  ಶಿಬಿರವನ್ನು ಉದ್ಘಾಟಿಸಿದರು . ಶಾಲಾ ಪ್ರಬಂಧಕ ಶ್ರೀ ಎನ್.ಸುಬ್ಬಣ್ಣ ಭಟ್  ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎನ್. ಎಚ್. ಲಕ್ಷ್ಮೀನಾರಾಯಣ ಭಟ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶ್ರೀ ಎನ್. ಶಂಕರನಾರಾಯಣ ಭಟ್ ಸ್ವಾಗತಿಸಿದರು . ಶ್ರೀಮತಿ ರೇವತಿ ಟೀಚರ್ ವಂದಿಸಿದರು . ಶ್ರೀನಿವಾಸ ಕೆ. ಎಚ್. ಕಾರ್ಯಕ್ರಮ ನಿರೂಪಿಸಿದರು. ಅನಂತರ ಶಾಲಾ ಅಧ್ಯಾಪಕ ಶ್ರೀ ರಾಮಮೋಹನ್ ಸಿ. ಎಚ್. ಅವರ ನೇತ್ರತ್ವದಲ್ಲಿ ಶಾಲೆಯ ಎಲ್ಲಾ ಅಧ್ಯಾಪಕ ಅಧ್ಯಾಪಿಕೆಯರ ಸಹಕಾರದೊಂದಿಗೆ ಬಾಯಿತಾಳ ಹೇಳುವುದು, ಪದ ನಿರ್ಮಾಣ, ಸ್ಮರಣ ಶಕ್ತಿ ಪರೀಕ್ಷೆ , ವಾರ್ತೆ ರವಾನಿಸುವ ಆಟ , ಕತೆ ಕ್ರಮೀಕರಣ , ಒಗಟು ಬಿಡಿಸುವ , ಮನೋರಂಜನಾ ಆಟಗಳು ಮೊದಲಾದ  ಚಟುವಟಿಕೆಗಳು ನಡೆದವು. ಎಲ್ಲಾ ಮಕ್ಕಳೂ ಬಹಳ ಉತ್ಸಾಹದಿಂದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಇನ್ನೂ ಇಂತಹ ಶಿಬಿರಗಳು ನಮಗೆ ಬೇಕು ಎಂದು ಮಕ್ಕಳು ಅಭಿಪ್ರಾಯ ಪಟ್ಟರು. 
ಹೆಚ್ಚಿನ ಪೋಟೋಗಳನ್ನು ಗ್ಯಾಲರಿಯಲ್ಲಿ ನೋಡಿರಿ .

Thursday, September 25, 2014

Vegetable Seed Distribution

ತರಕಾರಿ ಬೀಜ ವಿತರಣೆ :
ಮಕ್ಕಳಲ್ಲಿ ಸ್ವಾವಲಂಬನೆಯನ್ನು ಬೆಳೆಸುವ ಉದ್ದೇಶದಿಂದ ಕ್ರಷಿ ಇಲಾಖೆಯವರು ಒದಗಿಸಿದ ತರಕಾರಿ ಬೀಜಗಳನ್ನು ಇಂದು (26.9.2014) ಶಾಲಾ ಮುಖ್ಯೋಪಾಧ್ಯಾಯರು ವಿತರಿಸಿದರು. 

KANNADA MEDIUM TEACHER TEXT

FOR KANNADA MEDIUM TEACHER TEXTS CLICK HERE

School Level Science Quiz

ವಿಜ್ಞಾನ ರಸಪ್ರಶ್ನೆ :
ಇಂದು ನಮ್ಮ ಶಾಲೆಯಲ್ಲಿ ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು . ಯು. ಪಿ. ವಿಭಾಗದಲ್ಲಿ ಕಮಲಾಕ್ಷಿ ಟೀಚರ್ ಮತ್ತು ಎಲ್. ಪಿ. ವಿಭಾಗದಲ್ಲಿ ರೇವತಿ ಟೀಚರ್ ರಸಪ್ರಶ್ನೆಯನ್ನು ನಡೆಸಿದರು . ಅದರ ಪಲಿತಾಂಶ ಈ ಕೆಳಗಿನಂತಿದೆ .
ಎಲ್. ಪಿ. ವಿಭಾಗ :
I. ಜೋವಿನ್ ಡೆಲ್ ರಾಯ್  III Std
II. ಜೋಸ್ನಾ ಡಿ ಸೋಜ    IV Std.
ಯು. ಪಿ. ವಿಭಾಗ:
I. ಸಾತ್ವಿಕ್ ಕ್ರಷ್ಣ ಎನ್. VI C Std
II. ಪ್ರಣವ ಕುಮಾರ್ ಎನ್. VII C Std.
III. ಅರ್ಪಿತಾ ಎ.  VI C Std.
ವಿಜೇತರಿಗೆ ಅಭಿನಂದನೆಗಳು . ಪ್ರಥಮ ಸ್ಥಾನ ಪಡೆದ ಮಕ್ಕಳು ಉಪಜಿಲ್ಲಾ  ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಗಳಿಸಿರುತ್ತಾರೆ .

Wednesday, September 24, 2014

SAKSHARA CAMP

27.9.2014 ಶಾಲೆಯ ಸಾಕ್ಷರ ಶಿಬಿರ.:
 ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳನ್ನು ಮುಂದೆ ತರುವ ಸಾಕ್ಷರ ಯೋಜನೆಯ ಭಾಗವಾಗಿ ನಮ್ಮ ಶಾಲೆಯ ಸಾಕ್ಷರ ಶಿಬಿರ ನವೋಲ್ಲಾಸ -2014 ನ್ನು ಇದೇ ತಿಂಗಳ 27 ನೇ ತಾರೀಕು ಶನಿವಾರ ನಡೆಸಲಾಗುವುದು. ಶಿಬಿರವನ್ನು ಪುತ್ತಿಗೆ ಪಂಚಾಯತು ಸದಸ್ಯೆ ಕುಮಾರಿ ವಸಂತಿ ಉದ್ಘಾಟಿಸುವರು . ಶಾಲಾ ಪ್ರಬಂಧಕ ಶ್ರೀ ಎನ್. ಸುಬ್ಬಣ್ಣ ಭಟ್ ಮುಖ್ಯ ಅತಿಥಿಯಾಗಿ ಆಗಮಿಸುವರು .

Mangalyaana - Special Assembly

ಯಶಸ್ವೀ ಮಂಗಳಯಾನ - ಅಭಿನಂದನೆಗಳು:
2013 ನವೆಂಬರ್ 5 ರಂದು ಹೊರಟ ಮಂಗಳಯಾನವು ಇಂದು ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದೆ. ಚೀನಾ ಜಪಾನ್ ನಂತಹ ಏಷ್ಯಾದ ಪ್ರಬಲ ರಾಷ್ಟ್ರಗಳಿಗೆ ಮಾಡಲು ಸಾಧ್ಯವಾಗದುದನ್ನು ನಮ್ಮ ದೇಶದ ವಿಜ್ಞಾನಿಗಳು ಮಾಡಿ ಇಡೀ ಜಗತ್ತಿಗೆ  ತೋರಿಸಿದ್ದಾರೆ. ನಮ್ಮ ಶಾಲೆಯಲ್ಲಿ ಇಂದು ವಿಶೇಷ ಅಸೆಂಬ್ಲಿ ಸೇರಿ ಈ ಸಾಧನೆ ಮಾಡಿದ ಇಸ್ರೋ ದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಇನ್ನು ಮುಂದೆಯೂ ಇಂತಹ ಅನೇಕ ಯಾನಗಳನ್ನು ಮಾಡಿ ಇಡೀ ವಿಶ್ವದಲ್ಲಿಯೇ ನಮ್ಮ ದೇಶವು ಪಸಿದ್ದಿ ಪಡೆಯಲಿ ಎಂದು ನಾವು ಹಾರೈಸುತ್ತೇವೆ. ಶಾಲೆಯಲ್ಲಿ ನಡೆದ ಅಸೆಂಬ್ಲಿಯ ಫೊಟೊ ಮತ್ತು ವೀಡಿಯೋಗಳನ್ನು  ಗ್ಯಾಲರಿಯಲ್ಲಿ ನೋಡಿರಿ.

Tuesday, September 23, 2014

DASARA NAADA HABBA

ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ದಸರಾ ನಾಡಹಬ್ಬವನ್ನು ನವರಾತ್ರಿಯ ಯಾವುದಾದರೂ ಒಂದು ದಿನಗಳಲ್ಲಿ ಆಚರಿಸಬಹುದಾಗಿದೆ.
No. D2/9611/2014 Office of the Deputy Director, Education Kasaragod, Dated: 19.08.2014
As decided in District Level Committee of Linguistic Minorities, the Headmasters of all Kannada Medium Schools are requested to celebrate ‘Dasara Nadahabba’ the festival of knowledge in Kannada Medium Schools one day during Navarathri festival .
Yours faithfully,
Sd/-
DEPUTY DIRECTOR, EDUCATION,
KASARAGOD
ದಸರಾ ನಾಡಹಬ್ಬ2014,ಆಚರಣೆಯ ಮಾರ್ಗದರ್ಶಿ
ಕಾಸರಗೋಡು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಆಚರಿಸಬೇಕಾದ ದಸರಾ ನಾಡಹಬ್ಬದ ಕುರಿತು ಕಿರುನೋಟ.
ರೂಪು ರೇಷೆ ತಯಾರಿ- ಕೇರಳ ಪ್ರಾಂತ್ಯಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮತ್ತುಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು.
ದಸರಾ ನಾಡಹಬ್ಬ2014,ಆಚರಣೆಯ ಮಾರ್ಗದರ್ಶಿ.
ಮುನ್ನುಡಿ
ಕಾಸರಗೋಡಿನಲ್ಲಿ ಲಕ್ಷಾಂತರ ಕನ್ನಡಿಗರು ಕನ್ನಡ ಸಂಸ್ಕೃತಿಯ ವಾಹಕರಾಗಿ ಇಂದಿಗೂ ನೆಲೆನಿಂತಿರುವುದು ನಿಜಕ್ಕೂ ಕೇರಳ, ಕರ್ನಾಟಕ ಜನತೆಯ ಮತ್ತು ಸರಕಾರದ ಕ್ರಿಯಾತ್ಮಕ ಸಹಕಾರದಿಂದಾಗಿದೆ.ಕಲೆ,ಸಂಸ್ಕೃತಿ ನಿಂತ ನೀರಲ್ಲ.ಕಾಲಾನುಕಾಲಕ್ಕೆ ಬದಲಾವಣೆಗೊಳ್ಳುತ್ತದೆ.ದೃಶ್ಯ ಮಾಧ್ಯಮಗಳು,ಪತ್ರಿಕೆಗಳು ವಾಣಿಜ್ಯೋದ್ಧೇಶಗಲಿಂದ ಪ್ರೇರಿತವಾಗಿ ಕೆಲವೊಮ್ಮೆ ಜನರ ಸಾಂಪ್ರದಾಯಿಕ ಕಲೋಪಾಸನೆಗೆ ಸ್ಪಂದಿಸದೇ ಹೋಗಬಹುದು.ಆದರೆ ಸಾಂಪ್ರದಾಯಿಕ ಸಾಹಿತ್ಯ, ಕಲೆ,ಶಾಸ್ತ್ರೀಯ ಕಲೆಗಳು ಜನಸಾಮಾನ್ಯರ ಮನೆಮಾತಾಗಬೇಕಾದ ಅನಿವಾರ್ಯತೆಯಿದೆ.ಕೇಂದ್ರಸರಕಾರವು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ಆದರೆ ಯಾವುದೇ ಭಾಷೆ ಉನ್ನತ ಸ್ಥಾನಕ್ಕೇರಬೇಕಾದರೆ ಅದು ಜನಸಾಮಾನ್ಯರ ಸೊತ್ತಾಗಬೇಕು.ಸಾಂಪ್ರದಾಯಿಕ ಕಲೆ ಸಾಹಿತ್ಯ ಜನಪದ ಸಂಪತ್ತು ಪ್ರತಿಯೊಬ್ಬ ಕನ್ನಡಿಗನ ಹೃದಯಕ್ಕೆ ಹತ್ತಿರವಾಗಬೇಕು.ಈ ನಿಟ್ಟಿನಲ್ಲಿ ರಾಜ್ಯಗಳು ಆಚರಿಸುವ ನಾಡಹಬ್ಬಗಳು ಮಹತ್ತರ ಕಾರ್ಯವೆಸಗುತ್ತಿವೆ. ದಸರಾ ನಾಡಹಬ್ಬವೂ ಇದಕ್ಕೆ ಹೊರತಾಗಿಲ್ಲ. ಕಾಸರಗೋಡಿನ ಸಾಂಸ್ಕೃತಿಕ ಹಿನ್ನೆಯ ಆಧಾರದಲ್ಲಿ ನಾವು ಇಲ್ಲಿ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ಇದು ಅನಿವಾರ್ಯವಾಗಿದೆ.
ಈ ವರ್ಷ ದಸರಾ ನಾಡಹಬ್ಬವನ್ನು ನವರಾತ್ರಿಯ ಯಾವುದಾದರೊಂದು ದಿನ ಆಚರಿಸಬೇಕೆಂಬ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಸುತ್ತೋಲೆಗೆ ನಾವು ಸಕಾರಾತ್ಮಕ ಪ್ರತಿಕ್ರಿಯೆ ನೀಡಬೇಕಾಗಿದೆ. ಕನ್ನಡ ವಿದ್ಯಾರ್ಥಿಗಳಿಗೆ ಮತ್ತು ಕನ್ನಡಾಭಿಮಾನಿ ಕೇರಳಿಗರಿಗೆ ಕನ್ನಡ ಸಂಸ್ಕೃತಿಯ ಸಾರವನ್ನು ಪರಿಚಯಿಸಲು ಕೆಲವು ಕಾರ್ಯಕ್ರಮಗಳನ್ನು ಮುಂದಿಡುತ್ತಿದ್ದೇವೆ.
ಉದ್ದೇಶಗಳು - *ಮಕ್ಕಳಿಗೆ ಕನ್ನಡ ಸಾಹಿತ್ಯ,ಸಂಸ್ಕೃತಿಯ ಹಿರಿಮೆಯನ್ನು ತಿಳಿಸುವುದು.
*ಮಕ್ಕಳಿಗೆ ಸಾಹಿತ್ತಿಕ ರಚನೆಗಳಲ್ಲಿ ತೊಡಗುವಂತೆ ಪ್ರೇರೇಪಿಸುವುದು.
*ಜನಪದ ಕಲೆಗಳ ಕುರಿತು ಜಾಗೃತಿ ಮೂಡಿಸುವುದು.
*ಕನ್ನಡ ಸಾರಸ್ವತ ಲೋಕದೆಡೆಗೆ ಜನರ ಚಿತ್ತ ಸೆಳೆಯುವಂತೆ ಮಾಡುವುದು.
*ಸ್ಥಳೀಯ ಜನಪದ ಕಲಾವಿದರನ್ನು ಗೌರವಿಸುವುದು.
*ಸ್ಥಳೀಯ ಸಾಂಸ್ಕೃತಿಕ ರಾಯಭಾರಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು.
*ಮಕ್ಕಳನ್ನು ಓದುವ ಕಡೆಗೆ ಆಕರ್ಷಿಸುವಂತೆ ಮಾಡುವುದು.
*ಮಕ್ಕಳ ಸೃಜನಶೀಲ ಬರವಣಿಗೆಯನ್ನು ಪ್ರೋತ್ಸಾಹಿಸುವುದು.
*ಮಕ್ಕಳಿಗೆ ಕಲೆ, ಸಂಸ್ಕೃತಿಗಳಲ್ಲಿ ಒಲವು ಮೂಡುವಂತೆ ಪ್ರೇರೇಪಿಸುವುದು.
ಶಾಲೆಯಲ್ಲಿ ನಡೆಸಬಹುದಾದ ಸ್ಪರ್ಧೆಗಳು/ಚಟುವಟಿಕೆಗಳು.
ಕಿರಿಯ ಪ್ರಾಥಮಿಕ ವಿಭಾಗ – ಸಂಗೀತ ಕುರ್ಚಿ, ಮಿಠಾಯಿ ಹೆಕ್ಕುವುದು, ಪುಗ್ಗೆ ಒಡೆಯುವುದು, ಅಭಿನಯ ಗೀತೆ, ಕಥೆ ಹೇಳುವುದು, ಜಾನಪದ ಗೀತೆ, ನಾಡಗೀತೆ ಇತ್ಯಾದಿ.
ಹಿರಿಯ ಪ್ರಾಥಮಿಕ ವಿಭಾಗ –ಸಂಗೀತ ಕುರ್ಚಿ,ಲಿಂಬೆ ಚಮಚ ಓಟ, ಗೋಣಿಚೀಲ ಓಟ,ಮಡಕೆ ಒಡೆಯುವುದು,ಹುಲಿನಾಟ್ಯ, ಚಿತ್ರ ನೋಡಿ ಕಥೆ ಬರೆಯುವುದು,ಚಿತ್ರ ನೋಡಿ ಕವಿತೆ ಬರೆಯುವುದು,ಜಾನಪದ ಗೀತೆ, ನಾಡಗೀತೆ ಇತ್ಯಾದಿ.
ಪ್ರೌಢ ಶಾಲಾ ವಿಭಾಗ - ಸಂಗೀತ ಕುರ್ಚಿ,ಲಿಂಬೆ ಚಮಚ ಓಟ, ಗೋಣಿಚೀಲ ಓಟ, ಸುಂದರಿಗೆ ಬೊಟ್ಟು ಹಾಕುವುದು, ಹಗ್ಗ ಜಗ್ಗಾಟ,ಹುಲಿನಾಟ್ಯ,ಆಶು ಕವಿತೆ,ಆಶುಭಾಷಣ, ಕಥಾರಚನೆ, ತತ್ವಪದ,ಭಾಮಿನಿಷಟ್ಪದಿ ಕಾವ್ಯವಾಚನ.ಇತ್ಯಾದಿ
ಹೈಯರಿ ಸೆಕಂಡರಿ ವಿಭಾಗ - ಸಂಗೀತ ಕುರ್ಚಿ,ಲಿಂಬೆ ಚಮಚ ಓಟ, ಮಡಕೆಒಡೆಯುವುದು, ಸುಂದರಿಗೆಬೊಟ್ಟು ಹಾಕುವುದು, ಹಗ್ಗ ಜಗ್ಗಾಟ,ಹುಲಿನಾಟ್ಯ,ಆಶು ಕವಿತೆ,ಆಶುಭಾಷಣ, ಕಥಾರಚನೆ, ಮಂಕುತಿಮ್ಮನ ಕಗ್ಗದ ವಾಚನ,ಭಾಮಿನಿಷಟ್ಪದಿ ಕಾವ್ಯವಾಚನ.ಇತ್ಯಾದಿ
ಸಂಗೀತ ಕುರ್ಚಿ - ಮಕ್ಕಳ ಸಂಖ್ಯೆಗಿಂತ ಐದಾರು ಕುರ್ಚಿಗಳು ಕಡಿಮೆ ಇರಬೇಕು. ಅವುಗಳನ್ನು ವೃತ್ತಾಕಾರದಲ್ಲಿ ಇಡುವುದು. ಶಿಕ್ಷಕರು ಹಿತವಾದ ಸಂಗೀತವನ್ನು ಕೇಳುವಂತೆ ಮಾಡಬೇಕು. ಮಕ್ಕಳು ವೃತ್ತಾಕಾರದಲ್ಲಿ ಓಡಬೇಕು. ಸಂಗೀತ ನಿಲ್ಲಿಸಿದ ಕೂಡಲೇ ತನ್ನ ಎದುರಿಗಿರು ಕುರ್ಚಿಯಲ್ಲಿ ಮಕ್ಕಳು ಕುಳಿತುಕೊಳ್ಳಬೇಕು.ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ಬಂದು ಕೂರಬಾರದು. ಕುಳಿತುಕೊಳ್ಳಲು ಕುರ್ಚಿ ಸಿಗದ ಮಕ್ಕಳು ಆಟದಿಂದ ನಿರ್ಗಮಿಸಬೇಕಾಗುತ್ತದೆ. ಮುಂದೆ ಮಕ್ಕಳ ಸಂಖ್ಯೆಗಿಂತ ಒಂದೊಂದು ಕುರ್ಚಿಯನ್ನು ಕಡಿಮೆ ಮಾಡುತ್ತಾ ಆಟವನ್ನು ಮುಂದುವರಿಸಬೇಕು; ಕೊನೆಕೊನೆಗೆ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಕುರ್ಚಿಯೂ ಕಡಿಮೆಯಾಗುತ್ತದೆ.ಅಂತಿಮವಾಗಿ ಉಳಿದವನನು/ಳು ಸಂಗೀತ ಕುರ್ಚಿ ಆಟದಲ್ಲಿ ವಿಜಯಿ ಎ೦ದು ಪರಿಗಣಿಸಲಾಗುತ್ತದೆ.
ಮಿಠಾಯಿ ಹೆಕ್ಕುವುದು - ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು, ಸ್ವಲ್ಪ ಮಿಠಾಯಿಯನ್ನು ಮೊದಲೇ ಸಿದ್ದಗೊಳಿಸಿರಬೇಕಾಗುತ್ತದೆ. ವೃತ್ತದ ಮಧ್ಯಲ್ಲಿ ನಿಂತ ಶಿಕ್ಷಕರು ಮಿಠಾಯಿಯನ್ನು ಚೆಲ್ಲಬೇಕು. ಎಲ್ಲಾ ಮಕ್ಕಳು ಅದನ್ನು ಹೆಕ್ಕಬೇಕು. ಯಾರಿಗೆ ಅತೀ ಹೆಚ್ಚು ಮಿಠಾಯಿ ಸಿಕ್ಕಿದೆಯೋ ಅವರನ್ನು ವಿಜಯಿಯೆಂದು ಗುರಿತಿಸಬೇಕು.
ಪುಗ್ಗೆ ಒಡೆಯುವುದು - ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು,ಪ್ರತಿಯೊಬ್ಬ ಸ್ಪರ್ಧಾರ್ಥಿಗೆ ಮೂರು ಪುಗ್ಗೆಯಂತೆ ಮೊದಲೇ ಸಿದ್ದಗೊಳಿಸಿರಬೇಕಾಗುತ್ತದೆ. ಶಿಕ್ಷಕರು ವೃತ್ತದ ಮಧ್ಯದಲ್ಲಿ ನಿಂತು ವಿಶಿಲ್ ಊದಿ ಸದ್ದು ಮಾಡಿದ ತಕ್ಷಣ ಮಕ್ಕಳು ತಮ್ಮ ಪುಗ್ಗೆಯನ್ನು ಊದಿ ದೊಡ್ಡದಾಗಿಸಿ ಒಡೆಯಬೇಕು. ಯಾರು ಮೊದಲಿಗೆ ಮೂರು ಪುಗ್ಗೆಗಳನ್ನು ಊದಿ ಒಡೆಯುತ್ತಾರೆಯೋ ಅವನನ್ನು/ಳನ್ನು ವಿಜಯಿಯೆಂದು ಗುರುತಿಸಲಾಗುತ್ತದೆ.
ಲಿಂಬೆ ಚಮಚ ಓಟ- ಸಾಮಾನ್ಯ ಓಟ ಸ್ಪರ್ಧೆಯಲ್ಲಿ ಪ್ರಾರಂಭಿಸುವಂತೆ ಓಟಕ್ಕಾಗಿ ತಂಡಗಳನ್ನು ಮೊದಲೇ ಮಾಡಬೇಕು. ಸ್ಪರ್ಧಾರ್ಥಿಗಳು ಬಾಯಲ್ಲಿ ಚಮಚ ಅದರಲ್ಲೊಂದು ಲಿಂಬೆ ಹಣ್ಣು ಇರಿಸಬೇಕಾಗುತ್ತದೆ. ಮೊದಲಿಗೆ ತಲಪಿದವ ಜಯಶಾಲಿಯಾಗುತ್ತಾನೆ.
ಗೋಣಿಚೀಲ ಓಟ- ಗೋಣಿ ಚೀಲದ ಒಳಗೆ ಕಾಲುಗಳನ್ನು ಹಾಕಬೇಕು ಬಳಿಕ ಕುಪ್ಪಳಿಸಿಕೊಂಡು ನಿಗದಿತ ದೂರವನ್ನು ಕ್ರಮಿಸಬೇಕು. ಮೊದಲಿಗೆ ಗುರಿ ಮುಟ್ಟಿದವನು ವಿಜಯಿಯಾಗುತ್ತಾನೆ.ಇದನ್ನು ಸ್ಪರ್ಧಾರ್ಥಿಗಳ ಸಂಖ್ಯೆಗನುಸಾರವಾಗಿ ತಂಡಗಳಾಗಿ ಓಡಿಸಬೇಕಾಗುತ್ತದೆ.
ಮಡಕೆ ಒಡೆಯುವುದು- ನಿಗದಿತ ದೂರದಲ್ಲಿ ಎರಡು ಕಂಬಗಳನ್ನು ನೆಡಬೇಕು.ಅದಕ್ಕೆ ಕೋಲೊಂದನ್ನು ಭೂಸಮಾನಾಂತರವಾಗಿ ಜೋಡಿಸಬೇಕು. ಅದರ ಮಧ್ಯಕ್ಕೆ ಮಣ್ಣಿನ ಮಡಕೆಯೊಂದನ್ನು ಕಟ್ಟಬೇಕು.ಅದರೊಳಗೆ ಬಣ್ಣದ ನೀರನ್ನು ತುಂಬಿಸಿದರೆ ಇನ್ನೂ ಒಳ್ಳೆಯದು. ಮೊದಲೇ ಗುರುತಿಸಿದ ನಿರ್ಧಿಷ್ಟ ದೂರದಲ್ಲಿ ಸ್ಪರ್ಧಾರ್ಥಿಯನ್ನು ನಿಲ್ಲಿಸಬೇಕು. ಅವನ/ಅವಳ ಕಣ್ಣಿಗೆ ಬಟ್ಟೆ ಕಟ್ಟಿ ಕೈಯಲ್ಲೊಂದು ಕೋಲು ನೀಡಿ ಮೂರು ಸುತ್ತು ತಿರುಗಿಸಿ ಮಡಕೆಯಿರುವ ಕಡೆಗೆ ಮುಖ ಮಾಡಿ ಬಿಡಬೇಕು. ಕೋಲನ್ನು ಉಪಯೋಗಿಸಿಕೊಂಡು ಒಂದೇ ಹೊಡೆತಕ್ಕೆ ಮಡಕೆಯನ್ನು ಒಡೆಯಬೇಕು.ಹಲವಾರು ಸಲ ಕೋಲನ್ನು ಬೀಸುವಂತಿಲ್ಲ. ಹಾಗೆ ಮಡೆಕೆ ಒಡೆಯಲು ಸಾಧ್ಯವಾದವನು ವಿಜಯೆಯೆನಿಸಿಕೊಳ್ಳುತ್ತಾನೆ.
ಸುಂದರಿಗೆ ಬೊಟ್ಟು ಹಾಕುವುದು- ಗೋಡೆಯೊಂದರ ಪಕ್ಕದಲ್ಲಿ ಕರಿಹಲಗೆಯೊಂದನ್ನು ಇರಿಸಬೇಕು. ಚಾರ್ಟಿನಲ್ಲಿ ಸುಂದರಿಯೊಬ್ಬಳ ಮುಖದ ಚಿತ್ರವನ್ನು ಮೊದಲೇ ಸಿದ್ಧಗೊಳಿಸಬೇಕು.ಸುಂದರಿಗೆ ಬೊಟ್ಟುಹಾಕುವ ಸ್ಪರ್ಧಾಳು ನಿರ್ಧಿಷ್ಠ ಜಾಗದಲ್ಲಿ ನಿಂತುಕೊಳ್ಳಬೇಕು, ಶಿಕ್ಷಕರು ಆ ವ್ಯಕ್ತಿ ಕಣ್ಣಿಗೆ ಬಟ್ಟೆ ಕಟ್ಟಿ ಕೈಯಲ್ಲೊಂದು ಸ್ಟಿಕ್ಕರ್ ನೀಡಬೇಕು. ಯಾರು ತಮ್ಮ ಕೈಗೆ ಸಿಕ್ಕಿದ ಸ್ಟಿಕ್ಕರನ್ನು ಸುಂದರಿಯ ಹಣೆಗೆ ಇಡುವರೋ ಅವರು ಜಯಶಾಲಿಗಳಾಗುತ್ತಾರೆ.
ಹುಲಿನಾಟ್ಯ- ಐದರಿಂದ ಏಳು ಮಂದಿಯ ತಂಡಗಳು ಈ ಪ್ರದರ್ಶನ ನೀಡಬಹುದು.ಸಂಗೀತ ವ್ಯವಸ್ಥೆ ಶಾಲೆಯಿಂದಲೇ ಮಾಡುವುದು ಒಳ್ಳೆಯದು.ಬಹಳಚೆನ್ನಾಗಿ ಹತ್ತು ನಿಮಿಷಗಳ ಪ್ರದರ್ಶನ ನೀಡಿದವರನ್ನು ಗುರುತಿಸಬೇಕು.
ಸಾಹಿತ್ತಿಕ ಸ್ಪರ್ಧೆಗಳು
ಅಭಿನಯ ಗೀತೆ - ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಇದನ್ನು ಏರ್ಪಡಿಸಬಹುದು.
ಕಥೆ ಹೇಳುವುದು- ಆಂಗಿಕ ಅಭಿನಯದೊಂದಿಗೆ ಜಾನಪದ ಕಥೆಯೋ, ನೀತಿಕಥೆಯೋ ಆಗಬಹುದು.
ಜಾನಪದ ಗೀತೆ - ಜನರಿಂದ ಜನರಿಗೆ ಹರಡಿ ಜಾನಪದ ಎ೦ದೆನಿಕೊಳ್ಳುತ್ತದೆ. ಅಂತಹ ಜಾನಪದ ಗೀತೆಳನ್ನು ಆಯ್ಕೆ ಮಾಡಿಕೊಳ್ಳಬೇಕು.
ನಾಡಗೀತೆ - ಭಾಷಾಭಿಮಾನ ಉಂಟುಮಾಡುವ ಅದೆಷ್ಟೋ ಗೀತೆಗಳು ಪ್ರಚಲಿತದಲ್ಲಿವೆ; ಇವು ಯಾವುದೂ ಅನ್ಯ ಭಾಷೆಗೆ ಯಾವ ವಿರೋಧವನ್ನೂ ಮಾಡದೆ ಶಾಂತ ಸ್ವರೂಪದಿಂದ ಭಾಷೆಯ ಅಂದಚಂದವನ್ನು ಬಣ್ಣಿಸುತ್ತವೆ. ಆದುದರಿಂದ ಇಂತಹ ಗೀತೆಗಳನ್ನು ಮಕ್ಕಳು ಹಾಡುವುದರಿಂದ ಭಾಷಾಪ್ರೇಮ ಉಂಟಾಗುವುದು.
ಚಿತ್ರ ನೋಡಿ ಕಥೆ ಬರೆಯುವುದು-ಕಥೆ ಬರೆಯಲಿರುವ ತಂತ್ರಗಳಲ್ಲಿ ಇದು ಒಂದು. ಸಂದರ್ಭನುಸಾರವಾಗಿ ಕಥೆಯ ಸೃಷ್ಠಿಯ ಮೂಲಕ ಸೃಜನಾತ್ಮಕತೆಗೆ ಪ್ರೋತ್ಸಾಹ ಸಿಕ್ಕಿದಂತೆಯೂ ಆಗುತ್ತದೆ.
ಚಿತ್ರ ನೋಡಿ ಕವಿತೆಬರೆಯುವುದು - ಕವಿತೆ ಬರೆಯಲಿರುವ ತಂತ್ರಗಳಲ್ಲಿ ಇದು ಒಂದು. ಸಂದರ್ಭನುಸಾರವಾಗಿ ಕಥೆಯ ಸೃಷ್ಠಿಯ ಮೂಲಕ ಸೃಜನಾತ್ಮಕತೆಗೆ ಪ್ರೋತ್ಸಾಹ ಸಿಕ್ಕಿದಂತೆಯೂ ಆಗುತ್ತದೆ.
ಆಶು ಕವಿತೆ - ಮಕ್ಕಳ ಸಭಾಕಂಪನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದು ಬಹಳ ಮಹತ್ವಪೂರ್ಣ ಪಾತ್ರವಹಿಸುತ್ತದೆ.
ಆಶುಭಾಷಣ - ಮಕ್ಕಳ ಸಭಾಕಂಪನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದು ಬಹಳ ಮಹತ್ವಪೂರ್ಣ ಪಾತ್ರವಹಿಸುತ್ತದೆ.
ಕಥಾರಚನೆ - ಸಂದರ್ಭನುಸಾರವಾಗಿ ಕಥೆಯ ಸೃಷ್ಠಿಯ ಮೂಲಕ ಸೃಜನಾತ್ಮಕತೆಗೆ ಪ್ರೋತ್ಸಾಹ ಸಿಕ್ಕಿದಂತೆಯೂ ಆಗುತ್ತದೆ.
ತತ್ವಪದ – ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ತತ್ವ ಪದಗಳಿಗೆ ವಿಶಿಷ್ಠ ಸ್ಥಾನವಿದೆ ಇದರ ಪರಿಚಯಕ್ಕಾಗಿ ಇದರ ಅಳವಡಿಕೆ ಮಾಡಬಹುದು.
ಭಾಮಿನಿಷಟ್ಪದಿ ಕಾವ್ಯವಾಚನ – ನಡುಗನ್ನಡ ಕಾವ್ಯಗಳ ಸೊಂದಯ್ರದ ಕುರಿತು ಮಕ್ಕಳಿಗೆ ಗೊತ್ತಾಗಬೇಕಾದರೆ ಕಾವ್ಯವಾಚನದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಬೇಕಾಗಿದೆ .ಅದಕ್ಕಾಗಿ ಹೀಗೂ ಪ್ರಯತ್ನಿಸಬಹುದು.
ಮಂಕುತಿಮ್ಮನ ಕಗ್ಗದ ವಾಚನ – ಕಗ್ಗ ಆಧುನಿಕ ನೀತಿ ಚಿಂತಾಮಣಿ ಇದರ ಪರಿಚಯವಾದರೆ ಒಳ್ಳೆಯದು.
ಸಾಂಸ್ಕೃತಿಕ ವೈಭವದ ಅಂಗವಾಗಿ ಸ್ಥಳೀಯ/ಆಮಂತ್ರಿತ ಕಲಾವಿದರಿಂದ ಹರಿಕಥೆ, ಬೊಂಬೆಯಾಟ, ಜಾದೂಪ್ರದರ್ಶನ, ಜಾನಪದ ನೃತ್ಯ ಮೊದಲಾದ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಬಹುದು.ಶಾಲಾ ಮಟ್ಟದಲ್ಲಿ ವಸ್ತು ಪ್ರದರ್ಶನ, ಬೊಂಬೆಗಳ ಪ್ರದರ್ಶನ ನಡೆಸಬಹುದು. ನಮ್ಮ ಸಾಂಪ್ರಾಯಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲಪಿಸುವ ಜವಾಬ್ದಾರಿಯನ್ನು ಹೊತ್ತ ನಾವು ನಮ್ಮ ಮಕ್ಕಳೊಂದಿಗೆ ನಾಡ ಹಬ್ಬದ ಆಚರಣೆಯನ್ನು ಮಾಡೋಣ.

Saturday, September 20, 2014

September 21 - World Alzheimer's Day

ಸೆಪ್ಟಂಬರ್ 21 - ವಿಶ್ವ ಅಲ್ ಝೈಮರ್ಸ್ ದಿನ:
ಆಲ್‌ಝೈಮರ್‌‌ನ ಕಾಯಿಲೆ/ಅಲ್ಜಿಮರ್  ಎಂಬುದು ಬುದ್ಧಿಮಾಂದ್ಯತೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದ್ದು, ಇದನ್ನು ಆಲ್‌ಝೈಮರ್‌‌ ಕಾಯಿಲೆ/ಅಲ್ಜಿಮರ್ , ಸಿನೈಲ್‌ ಡಿಮೆನ್ಷಿಯಾ ಆಫ್‌ ದಿ ಆಲ್‌ಝೈಮರ್‌ ಟೈಪ್‌ (SDAT ), ಪ್ರೈಮರಿ ಡೀಜನರೇಟಿವ್‌ ಡಿಮೆನ್ಷಿಯಾ ಆಫ್‌ ದಿ ಆಲ್‌ಝೈಮರ್‌ ಟೈಪ್‌ (PDDAT ), ಅಥವಾ ಆಲ್‌ಝೈಮರ್‌‌ನ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಈ ವಾಸಿಮಾಡಲಾಗದ, ಅಂಗಾವನತಿಯ, ಮತ್ತು ಮಾರಕ ಕಾಯಿಲೆಯನ್ನು ಅಲೋಯ್ಸ್‌‌ ಆಲ್‌ಝೈಮರ್‌‌ ಎಂಬ ಜರ್ಮನ್‌ ಮನೋವೈದ್ಯ ಮತ್ತು ನರರೋಗಶಾಸ್ತ್ರಜ್ಞನು 1906ರಲ್ಲಿ ಮೊದಲು ವಿವರಿಸಿದ ಹಾಗೂ ಈ ಕಾಯಿಲೆಗೆ ಅವನ ಹೆಸರನ್ನೇ ಇಡಲಾಯಿತು. ಬಹುತೇಕ ಸಂದರ್ಭಗಳಲ್ಲಿ, 65 ವರ್ಷಗಳಿಗೂ ಹೆಚ್ಚಿನ ವಯಸ್ಸಿನ ಜನರಲ್ಲಿ ಇದರ ರೋಗನಿರ್ಣಯವನ್ನು ಮಾಡಲಾಗುತ್ತದೆಯಾದರೂ, ಕಡಿಮೆ-ಚಾಲ್ತಿಯಲ್ಲಿರುವ ಆರಂಭದ-ಆಕ್ರಮಣದ ಆಲ್‌ಝೈಮರ್‌‌ ಕಾಯಿಲೆಯು ಸಾಕಷ್ಟು ಮುಂಚಿತವಾಗಿಯೇ ಸಂಭವಿಸಬಹುದು. 2006ರಲ್ಲಿ, ವಿಶ್ವಾದ್ಯಂತ 26.6 millionನಷ್ಟು ಸಂಖ್ಯೆಯ ಜನರು ಈ ಕಾಯಿಲೆಯಿಂದ ನರಳುತ್ತಿದ್ದರು. 2050ರ ವೇಳೆಗೆ ಪ್ರತಿ 85 ಜನರ ಪೈಕಿ ಒಬ್ಬರಿಗೆ ಆಲ್‌ಝೈಮರ್‌‌ ಕಾಯಿಲೆಯು ತಗುಲುತ್ತದೆ ಎಂದು ಊಹಿಸಲಾಗಿದೆ. ಪ್ರತಿ 68 ಸೆಕೆಂಡಿಗೆ ಒಬ್ಬರಂತೆ ಈ ಕಾಯಿಲೆಗೆ ಒಳಗಾಗುತ್ತಾರೆ . 

September 18 - World Bamboo Day

ಸೆಪ್ಟಂಬರ್ 18 - ವಿಶ್ವ ಬಿದಿರು ದಿನ:
ಪರಿಸರ ಸಂರಕ್ಷಣೆಗೆ ಅನಿವಾರ್ಯವಾದ ಬಿದಿರು ಕಾಡುಗಳ ರಕ್ಷಣೆಯ ಕುರಿತು ನೆನಪಿಸಲಿಕ್ಕಾಗಿ  ಸೆಪ್ಟಂಬರ್ 18 ನ್ನು ವಿಶ್ವ ಬಿದಿರು ದಿನವಾಗಿ ಆಚರಿಸುತ್ತಾರೆ  ಭತ್ತ, ಗೋಧಿ, ಬಾರ್ಲಿಯಂತೆ ಬಿದಿರು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯವಾಗಿದೆ. ವಿಶ್ವದಲ್ಲಿ ಅತಿ ಹೆಚ್ಚು ಎತ್ತರಕ್ಕೆ ಬೆಳೆಯುವ ಹುಲ್ಲು ಬಿದಿರು ಆಗಿದೆ. ಬಿದಿರು ಒಳಗೊಂಡ ಹುಲ್ಲುಗಾವಲುಗಳು ಸಸ್ಯಾಹಾರಿ ಪ್ರಾಣಿಗಳ ಉಳಿವಿಗೆ ಅತ್ಯಾವಶ್ಯವಾಗಿದೆ . ಬಿದಿರುಗಳನ್ನು ಕಡಿಯುವುದು, ಕಾಡ್ಗಿಚ್ಚು , ಅರಣ್ಯ ನಾಶ ಮೊದಲಾದುವುಗಳಿಂದ ಬಿದಿರು ಕಾಡುಗಳು ನಾಶವಾಗುತ್ತಿವೆ.ಬಿದಿರಿನಿಂದ ನಮಗೆ ತುಂಬಾ ಪ್ರಯೋಜನವಿದೆ. ಆದುದರಿಂದ  ಅದನ್ನು ಸಂರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ 

Cluster Training Boycott

ಕ್ಲಸ್ಟರ್ ತರಬೇತಿಗೆ ಬಹಿಷ್ಕಾರ :
ಕನ್ನಡ ಪಾಠ ಪುಸ್ತಕ ಮತ್ತು ಅಧ್ಯಾಪಕರ ಕೈಪಿಡಿ ಪುಸ್ತಕ  ಒದಗಿಸದುದನ್ನು ಪ್ರತಿಭಟಿಸಿ ಇಂದು GHSS BANGRAMENJESHWARAದಲ್ಲಿ ಜರಗಿದ ಎಲ್. ಪಿ. ಕನ್ನಡ ಮಾದ್ಯಮದ ಕ್ಲಸ್ಟರ್ ತರಬೇತಿಯನ್ನು ಬಹಿಷ್ಕರಿಸಲಾಯಿತು

Friday, September 19, 2014

Scouts and Guides Camp

ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರು
ಹೆದ್ದಾರಿ ಎ.ಯು.ಪಿ. ಶಾಲೆ ಬಾಯಾರಿನಲ್ಲಿ ಇಂದಿನಿಂದ ಪ್ರಾರಂಭವಾಗುವ ಮಂಜೇಶ್ವರ ಉಪಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ನಾಯಕರ ಶಿಬಿರದಲ್ಲಿ ಭಾಗವಹಿಸಲು ತಯಾರಾದ ನಮ್ಮ ಶಾಲೆಯ ಪೆಟ್ರೋಲ್ ಲೀಡರ್ಸ್ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸ್ಕೌಟ್ ಗೈಡ್ ಅಧ್ಯಾಪಕರೊಂದಿಗೆ

Wednesday, September 17, 2014

Hindi Quiz

हिन्दी रसप्रश्न :
 हिन्दी दिवस के सम्बंधित आज एक रसप्रश्न कार्यक्रम चली गई  ।  इसमें सात्विक कृष्ण और अपूर्वा एडकाना प्रथम स्थान , प्रणव कुमार एन द्वितीय स्थान तथा आदित्य इ एच और श्रीचरणा  तृतीय स्थान में  विजयी हुई । फोटो  ग्यालरी में देखिये ।

Tuesday, September 16, 2014

HM's conference

ಮುಖ್ಯೋಪಾಧ್ಯಾಯರ ಸಭೆಯ ಮುಖ್ಯಾಂಶಗಳು :
ಇಂದು ಅಪರಾಹ್ನ ಎರಡು ಘಂಟೆಗೆ ಮಂಜೇಶ್ವರ ಬಿ. ಆರ್. ಸಿ ಯಲ್ಲಿ ಜರಗಿದ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಹಾಗೂ ಮಂಜೇಶ್ವರ ಬಿ.ಪಿ.ಒ ನೀಡಿದ ಮಾಹಿತಿಗಳು.
  • ಸೆಪ್ಟಂಬರ್ 20 ರಂದು ನಡೆಯುವ ಕ್ಲಸ್ಟರ್ ತರಬೇತಿಯಲ್ಲಿ ಹಿಂದಿ,ಸಂಸ್ಕ್ರತ,ಉರ್ದು,ಅರೇಬಿಕ್ ಮತ್ತು ಯು.ಪಿ.ಕನ್ನಡ ಭಾಷಾ ಅಧ್ಯಾಪಕರನ್ನು ಬಿಟ್ಟು ಉಳಿದ ಎಲ್ಲಾ ಅಧ್ಯಾಪಕರು ತಪ್ಪದೆ ಹಾಜರಾಗಬೇಕು. 
  • ಕ್ಲಸ್ಟರ್ ತರಬೇತಿ ಕೇಂದ್ರಗಳು :1 ರಿಂದ 4 ತರಗತಿ ಕನ್ನಡ - GHSS Bangramanjeshwara, ಯು.ಪಿ. ಇಂಗ್ಲೀಶ್, ಸಮಾಜ ವಿಜ್ಞಾನ, ಮೂಲ ವಿಜ್ಞಾನ, ಗಣಿತ (ಕನ್ನಡ ಮಾಧ್ಯಮ)- GHSS Uppala, LP Malayalam Medium - BRC Manjeshwara, UP Malayalam (Core subject) - GUPS Kasaragod
  • ಸೆಪ್ಟಂಬರ್ 19 ರಿಂದ 22ರ ವರೆಗೆ ಹೆದ್ದಾರಿ ಎ.ಯು.ಪಿ. ಶಾಲೆ ಬಾಯಾರು ಮುಳಿಗದ್ದೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರ ಶಿಬಿರ. ಪ್ರತಿಯೊಂದು ಶಾಲೆಯಿಂದ ತಲಾ ನಾಲ್ಕು ಸ್ಕೌಟ್ಸ್ ಮತ್ತು ಗೈಡ್ಸ್ ಭಾಗವಹಿಸಬೇಕು. 
  • ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸ್ಪರ್ಧೆಗಳು ಸೆಪ್ಟಂಬರ್ ಕೊನೆಯ ವಾರದಲ್ಲಿ GHSS Mangalpady ಯಲ್ಲಿ ನಡೆಯಲಿರುವುದು. ಅದರ ಪೂರ್ವಭಾವಿಯಾಗಿ organising committee ಸಭೆಯು ಸೆಪ್ಟಂಬರ್ 18 ರಂದು ಅಪರಾಹ್ನ ಎರಡು ಘಂಟೆಗೆ GHSS Mangalpady ಯಲ್ಲಿ ನಡೆಯಲಿರುವುದು. 
  • ಸೆಪ್ಟಂಬರ್ 23 ರಂದು ಬಿ. ಅರ್.ಸಿ. ಮಂಜೇಶ್ವರದಲ್ಲಿ ಒಂದು ದಿನದ Work experience workshop ನಡೆಯಲಿರುವುದು. ಪ್ರತೀ ಶಾಲೆಯಿಂದ ಆಸಕ್ತಿಯಿರುವ ಒಬ್ಬರು ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಬೇಕು. (ಕತ್ತರಿ, ಸೂಜಿ ನೂಲು, ಪೇಪರ್ ನೈಫ್ ,ಸ್ಕೇಲ್, ವೇಸ್ಟ್ ಸೋಕ್ಸ್, ವೇಸ್ಟ್ ಬಟ್ಟೆ,ಇತ್ಯಾದಿ ಕೊಂಡುಹೋಗಬೇಕು)
  • First Term Evaluation - ಬದಲಾದ ವೇಳಾಪಟ್ಟಿ
  • ಸೆಪ್ಟಂಬರ್ ಕೊನೆಯ ವಾರದಲ್ಲಿ ಕ್ಲಾಸ್ ಪಿ.ಟಿ.ಎ. ನಡೆಸಬೇಕು. 
  • ವಿಜ್ಞಾನ ಸಂಘದ ಆಶ್ರಯದಲ್ಲಿ ಶಾಲಾ ಮಟ್ಟದಲ್ಲಿ ಸೆಪ್ಟಂಬರ್ 25ರಂದು ವಿಜ್ಞಾನ ರಸಪ್ರಶ್ನೆ ನಡೆಸಬೇಕು 
  • ಶಾಲಾ ಮಟ್ಟದಲ್ಲಿ ದಸರಾ ನಾಡ ಹಬ್ಬ ಆಚರಿಸುವುದು 
  • ಸಾಕ್ಷರ ಯೋಜನೆಯ ಭಾಗವಾಗಿ ಒಂದು ಶನಿವಾರ ಶಾಲಾ ಮಟ್ಟದ ಶಿಬಿರವನ್ನು ನಡೆಸುವುದು

September 16- International Ozone Day


ವಿಶ್ವ ಓಝೋನ್ ದಿನಾಚರಣೆ :
ನಮ್ಮ ಶಾಲೆಯಲ್ಲಿ ಇಂದು ವಿಶ್ವ ಓಝೋನ್   ದಿನವನ್ನು ಆಚಿಸಲಾಯಿತು . ಬೆಳಿಗ್ಗೆ ವಿಶೇಷ ಅಸೆಂಬ್ಲಿ ಸೇರಿ ಓಝೋನ್ ದಿನಾಚರಣೆಯ ಮಹತ್ವದ ಬಗ್ಗೆ ವಿಜ್ಞಾನ ಅಧ್ಯಾಪಿಕೆ ಶ್ರೀಮತಿ ಕಮಲಾಕ್ಷಿ ಟೀಚರ್ ಮಾಹಿತಿನೀಡಿದರು.

Monday, September 15, 2014

September 15 - Engineers Day

ಇಂದು (ಸೆಪ್ಟಂಬರ್ 15 )  ಎಂಜಿನಿಯರ್ಸ್ ಡೇ :
ದೇಶದ ಅಪ್ರತಿಮ ಎಂಜಿನಿಯರ್ ಸರ್.ಎಮ್. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಇಂದು (ಸೆಪ್ಟಂಬರ್ 15) ದೇಶದಾದ್ಯಂತ ಎಂಜಿನಿಯರ್ ಸಮುದಾಯವು ಎಂಜಿನಿಯರ್ಸ್ ಡೇ ಎಂದು ಆಚರಿಸುತ್ತಾರೆ .  ಶಿಕ್ಷಣ ತಜ್ಞರಾಗಿ, ಕೈಗಾರಿಕಾ ಕ್ರಾಂತಿಯ ಹರಿಕಾರರಾಗಿ ಅನೇಕ  ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸ ಮಾಡಿದ ಚತುರ ಎಂಜಿನಿಯರ್,ದಕ್ಷ ಆಡಳಿತಗಾರ ಸಹ್ರದಯಿ , ದಯಾಮಯಿ ಸರ್.ಎಮ್. ವಿಶ್ವೇಶ್ವರಯ್ಯ ಅವರ 154 ನೇ ಹುಟ್ಟುಹಬ್ಬ. ಸರ್. ಎಮ್. ವಿ. ಎಂದೇ ಪ್ರಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ  ಅವರು 1860 ಸೆಪ್ಟಂಬರ್ 15 ರಂದು ಕರ್ನಾಟಕದ ಮುದ್ದೇನಹಳ್ಳಿಯಲ್ಲಿ ಜನಿಸಿದರು. ವ್ರತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಅವರು ಎಂಜಿನಿಯರ್ ಹುದ್ದೆಯನ್ನು ತೊರೆದು ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದರು. ಮೈಸೂರಿನ ಪ್ರಖ್ಯಾತ ಕನ್ನಂಬಾಡಿ ಅಣೆಕಟ್ಟನ್ನು ಕಟ್ಟಿಸಿದರು. ಅಲ್ಲದೆ ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ  ಸ್ವಯಂಚಾಲಿತ  ಫ್ಲಡ್ ಗೇಟ್ ವಿನ್ಯಾಸವೊಂದನ್ನು ಕಂಡುಹಿಡಿದು ಅದಕ್ಕಾಗಿ  ಪೇಟೆಂಟ್ ಪಡೆದರು. 1955 ರಲ್ಲಿ ಭಾರತ ಸರಕಾರದ ಪರಮೋನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯು ಅವರಿಗೆ ಲಭಿಸಿತು. ಅಂತಹ ಮಹಾನ್ ವ್ಯಕ್ತಿಗೆ ನಮ್ಮೆಲ್ಲ್ಲರ ಆದರ ಪೂರ್ಣ ನಮನಗಳು. ಮತ್ತು ದೇಶದ ಎಲ್ಲಾ ಎಂಜಿನಿಯರುಗಳಿಗೆ ಶುಭಾಶಯಗಳು. 

Saturday, September 13, 2014

Hindi Divas

आज (सितम्बर १४ ) हिन्दी दिवस :



हमारी राष्ट्रभाषा हिन्दी है। यह विश्व की दूसरी सबसे बड़ी भाषा है । चीनी भाषा के बाद यह विश्व  में सबसे अधिक बोली जाने वाली भाषा है । 
 ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿದೆ . ನಮ್ಮ ದೇಶದಲ್ಲಿ ಸೆಪ್ಟಂಬರ್ 14 ನ್ನು ಹಿಂದಿ ದಿನವಾಗಿ ಆಚರಿಸಲಾಗುತ್ತದೆ . ಯಾಕೆಂದರೆ  ನಮ್ಮ ಸಂವಿಧಾನವು 1949 ಸೆಪ್ಟಂಬರ್ 14 ರಂದು ದೇವನಾಗರಿ ಲಿಪಿಯಲ್ಲಿ ಬರೆದ ಹಿಂದಿ ಭಾಷೆಯನ್ನು ದೇಶದ ಔದ್ಯೋಗಿಕ ಭಾಷೆಯಾಗಿ ಸ್ವೀಕರಿಸಿತು. ಹಿಂದಿ ಭಾಷೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಹಿಂದಿ ದಿನವನ್ನು ಆಚರಿಸಲಾಗುತ್ತದೆ . ಹಿಂದಿಯನ್ನು ನಮ್ಮ ದೇಶವಲ್ಲದೆ ನೇಪಾಳ, ಮೌರೀಷಿಯಸ್ , ಪಾಕಿಸ್ತಾನ, ಸುರಿನಾಮ್, ಟ್ರಿನಿಡಾಡ್ ಮತ್ತು ಇತರ ಕೆಲವು ದೇಶಗಳಲ್ಲಿ ಉಪಯೋಗಿಸುತ್ತಾರೆ. ಪ್ರಪಂಚದಲ್ಲಿ ಸುಮಾರು 258 ಮಿಲಿಯ ಜನರು ಹಿಂದಿ ಮಾತನಾಡುತ್ತಾರೆ ಮತ್ತು ಇದು ವಿಶ್ವದ 5 ನೆ ದೊಡ್ಡ ಭಾಷೆಯಾಗಿದೆ .

Thursday, September 11, 2014

WildLife week celebration 2014

ವನ್ಯ ಜೀವಿ ಸಪ್ತಾಹ 2014 - ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು 
ವನ್ಯ ಜೀವಿ ಸಪ್ತಾಹದ ಅಂಗವಾಗಿ ಕೇರಳ ಅರಣ್ಯ ಇಲಾಖೆಯವರು ಕೇರಳದ  ಸರಕಾರಿ  ಹಾಗೂ ಐಡೆಡ್ ಶಾಲಾ ಮಕ್ಕಳಿಗಾಗಿ  ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಿದ್ದಾರೆ  . ಎಲ್. ಪಿ. ಮತ್ತು ಯು. ಪಿ. ವಿಭಾಗದ ಮಕ್ಕಳಿಗೆ ಪೆನ್ಸಿಲ್ ಡ್ರಾಯಿಂಗ್ ಮತ್ತು ವಾಟರ್ ಕಲರ್ ಪೈಂಟಿಂಗ್ , ಹೈಸ್ಕೂಲ್ ಮತ್ತು ಕಾಲೇಜು ವಿಭಾಗದ ಮಕ್ಕಳಿಗೆ ಪೆನ್ಸಿಲ್ ಡ್ರಾಯಿಂಗ್ , ವಾಟರ್ ಕಲರ್ ಅಲ್ಲದೆ ರಸಪ್ರಶ್ನೆ , ಪ್ರಬಂಧ ರಚನೆ ಹಾಗೂ ಭಾಷಣ ಸ್ಪರ್ಧೆಗಳು ನಡೆಯಲಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗಳ ಆಯಾ ಜಿಲ್ಲೆಗಳ ಆಯ್ದ ಕೇಂದ್ರಗಳಲ್ಲಿ ಅಕ್ಟೋಬರ್ 1 ರಂದು ನಡೆಯಲಿದೆ . ರಾಜ್ಯ ಮಟ್ಟದ ಸ್ಪರ್ಧೆಯು ಅಕ್ಟೋಬರ್ 7 ರಂದು ತೇಕ್ಕಡಿಯಲ್ಲಿ ನಡೆಯಲಿರುವುದು. ಹೆಚ್ಚಿನ ಮಾಹಿತಿಗೆ http://www.forest.kerala.gov.in/ ಸೈಟನ್ನು ನೋಡಿರಿ

Monday, September 8, 2014

Sri Narayana Guru Jayanthi

ಇಂದು (ಸೆಪ್ಟಂಬರ್ 8 ) ಶ್ರೀ ನಾರಾಯಣಗುರು ಜಯಂತಿ :
ಶ್ರೀ ನಾರಾಯಣ ಗುರು ಕೇರಳದ ಪ್ರಸಿದ್ದ ಸಮಾಜ ಸುಧಾರಕರು. ಕೇರಳ ರಾಜ್ಯದಲ್ಲಿ ಜಾತಿ ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ಜನಿಸಿದ ಒಬ್ಬ ಮಹಾನ್ ಸಮಾಜ ಸುಧಾರಕರು. "ಒಂದೇ ಜಾತಿ ,ಒಂದೇ ಮತ, ಒಂದೇ ದೈವ " ಎಂಬ ತತ್ವವನ್ನು ಪ್ರತಿಪಾದಿಸಿದ ಮಹಾನ್ ವ್ಯಕ್ತಿ . ಕೆಳ ಜಾತಿಯವರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿಷಿದ್ಧವಿದ್ದ ಸಮಯದಲ್ಲಿ ಅವರು  ತಾವೇ ಅನೇಕ ದೇವಾಲಯಗಳನ್ನು ಸ್ಥಾಪಿಸಿದರು. ದೇಶ ಸೇವೆಯೇ ಈಶ ಸೇವೆ ಎಂದು ಜನರಿಗೆ ಬೋಧಿಸಿದರು.

International Literacy Day on September 8


Friday, September 5, 2014

P M Narendra Modis Interaction

ಭಾರತದ ಪ್ರಧಾನಿಯವರ ಭಾಷಣ 
ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ಮಕ್ಕಳೊಂದಿಗೆ ನಡೆಸಿದ ಸಂವಾದದ ನೇರ ಪ್ರಸಾರವನ್ನು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ತೋರಿಸುವ ವ್ಯವಸ್ಥೆಯನ್ನು ಮಾಡಿದೆವು. ಎಲ್. ಸಿ. ಡಿ ಪ್ರೊಜೆಕ್ಟರ್ ನ ಸಹಾಯದಿಂದ ಎಲ್ಲಾ ಮಕ್ಕಳೂ ಈ ನೇರ ಪ್ರಸಾರವನ್ನು  ವೀಕ್ಷಿಸಿದರು.
For full video Click Here

Distribution of Onam Special Rice

ಓಣಂ ಹಬ್ಬದ ಅಕ್ಕಿ ವಿತರಣೆ 
ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ  ಒಳಪಟ್ಟ ಮಕ್ಕಳಿಗೆ ಸರಕಾರದಿಂದ ಉಚಿತವಾಗಿ ಒದಗಿಸಿದ ಐದು ಕಿಲೋ ಅಕ್ಕಿಯನ್ನು ಇಂದು ವಿತರಿಸಲಾಯಿತು

Onam Celeberation

ಓಣಂ ಹಬ್ಬದ ಆಚರಣೆ 
ನಮ್ಮ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು ..ಎಲ್ಲಾ ತರಗತಿಗಳಲ್ಲಿಯೂ ಹೂವಿನ ರಂಗೋಲಿ ಪೂವಲಿಯನ್ನು ಹಾಕಿ ಅಲಂಕರಿಸಿದರು. ಮಧ್ಯಾಹ್ನ ಪಾಯಸದೊಂದಿಗೆ ಔತಣದ ಊಟವನ್ನು ಸವಿಯಲಾಯಿತು.
ಹೆಚ್ಚಿನ  ಫೊಟೊಗಳಿಗೆ ಗ್ಯಾಲರಿ ನೋಡಿರಿ

Teachers Day Celeberation

ಶಿಕ್ಷಕ ದಿನಾಚರಣೆ 
ನಮ್ಮ ಶಾಲೆಯಲ್ಲಿ ಭಾರತದ  ರಾಷ್ಟ್ರಪತಿಗಳಾಗಿದ್ದ ಡಾ\ ಎಸ್. ರಾಧಾಕ್ರಷ್ಣನ್ ಅವರ ಜನ್ಮದಿನವನ್ನು ಆಚರಿಸಲಾಯಿತು. ಮಳೆ ಇದ್ದುದರಿಂದ ಎಸೆಮ್ಬ್ಲಿ ನಡೆಸಲು ಸಾಧ್ಯವಾಗಲಿಲ್ಲ. ಎಲ್ಲಾ ತರಗತಿಗಳಲ್ಲಿ ಕ್ಲಾಸು ಉಪಾಧ್ಯಾಯರು ರಾಧಾಕ್ರಷ್ಣನ್ ಅವರ ಕುರಿತು ಕಿರು ಮಾಹಿತಿ ನೀಡಿದರು. ಅನಂತರ ವಿಕ್ಟರ್ಸ್ ಚಾನೆಲ್ ನಲ್ಲಿ ರಾಧಾಕ್ರಷ್ನನ್ ಅವರ ಕುರಿತಾದ ಡೊಕ್ಯುಮೆಂಟರಿಯನ್ನು ಪ್ರದರ್ಶಿಸಲಾಯಿತು.
ಹೆಚ್ಚಿನ ಫೊಟೊಗಳನ್ನು ಗ್ಯಾಲರಿಯಲ್ಲಿ ನೋಡಿರಿ.

Inauguration of School blog

 ಶಾಲಾ ಬ್ಲಾಗ್ ನ ಉದ್ಘಾಟನೆ :
ನಮ್ಮ ಶಾಲೆಯ ಬ್ಲಾಗನ್ನು ಶಾಲಾ ಪ್ರಬಂಧಕ ಶ್ರೀ ಎನ್.ಸುಬ್ಬಣ್ಣ ಭಟ್  ಮೌಸ್ ಒತ್ತುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಿದರು. ಶಾಲಾ ಅಧ್ಯಾಪಕ ಶಂಕರನಾರಾಯಣ ಭಟ್  ಬ್ಲಾಗಿನ ಕುರಿತು ಮಾಹಿತಿ ನೀಡಿದರು. ಅನಂತರ  ಮಕ್ಕಳಿಗೆ ಬ್ಲಾಗನ್ನು ಪ್ರದರ್ಶಿಸಲಾಯಿತು.
ಹೆಚ್ಚಿನ ಫೊಟೊಗಳನ್ನು ಗ್ಯಾಲರಿಯಲ್ಲಿ ನೋಡಿರಿ

Thursday, September 4, 2014

Happy Teachers Day

ಸೆಪ್ಟಂಬರ್ 5 ಶಿಕ್ಷಕ ದಿನ :
।। ಗುರುಬ್ರಹ್ಮ ಗುರುವಿಷ್ಣುಃ ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ  ನಮಃ ।। 
ಎಲ್ಲಾ ಶಿಕ್ಷಕ ಬಂಧುಗಳಿಗೂ ಶಿಕ್ಷಕ ದಿನದ ಹಾರ್ದಿಕ  ಶುಭಾಶಯಗಳು
ಸೆಪ್ಟಂಬರ್ 5 ರಂದು ಶಿಕ್ಷಕರ ದಿನವಾಗಿ  ಆಚರಿಸಲಾಗುತ್ತದೆ. ಸ್ವತಂತ್ರ ಭಾರತದ ದ್ವಿತೀಯ ರಾಷ್ಟಪತಿ ಡಾಕ್ಟರ್ ಸರ್ವಪಲ್ಲಿ ರಾಧಾಕ್ರಷ್ಣನ್ ಅವರ ಜನ್ಮದಿನ. ಡಾ। ರಾಧಾಕ್ರಷ್ಣನ್ ಅವರು 1888 ಸೆಪ್ಟಂಬರ್ 5  ರಂದು ತಮಿಳುನಾಡಿನ ಚಿತ್ತೂರು ಜಿಲ್ಲೆಯ ತಿರುತ್ತಣಿಯಲ್ಲಿ ಜನಿಸಿದರು. ಸರ್ವಪಲ್ಲಿ ಎಂಬುದು ಅವರ ಮನೆತನದ ಹೆಸರು. ರಾಧಾಕ್ರಷ್ಣನ್ ಎಂಬುದು ಅವರ ತಂದೆ ತಾಯಿ ಇಟ್ಟ ಮುದ್ದಿನ ಹೆಸರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ಬಳಿಕ ತತ್ವಜ್ಞಾನ ವಿಷಯದ ಮೇಲೆ ಬಿ.ಎ. ಮತ್ತು ಎಮ್.ಎ. ಪದವಿಯನ್ನು ಪೂರೈಸಿದರು. ಬಳಿಕ ಅನೇಕ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆಗೈದರು. ಅನಂತರ ಕೆಲವು ವಿಶ್ವವಿದ್ಯಾಲಯಗಳ ಉಪಕುಲಪತಿಗಳಾಗಿಯೂ ಸೇವೆಗೈದರು.  ಶಿಕ್ಷಣ ಕ್ಷೇತ್ರದಲ್ಲಿ ಡಾ।ರಾಧಾಕ್ರಷ್ಣನ್  ಅವರ   ಸಾಧನೆಯನ್ನು ಮೆಚ್ಚಿ ಬ್ರಿಟನ್ ಆಕ್ಸ್ ಪೋರ್ಡ್ ವಿ.ವಿ ಮತ್ತು ಅಮೇರಿಕಾದ ಹಾರ್ವರ್ಡ್ ವಿ.ವಿ. ಅವರಿಗೆ ಗೌರವ ಡಾಕ್ಟರೇಟ್ ಬಿರುದು ನೀಡಿ ಗೌರವಿಸಿತು. 1952 ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ಡಾ। ರಾಧಾಕ್ರಷ್ಣನ್ ಆರಿಸಲ್ಪಟ್ಟರು. ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿರುವಾಗಲೇ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಡಾ. ರಾಜೇಂದ್ರ ಪ್ರಸಾದರ ನಂತರ ಡಾ. ರಾಧಾಕ್ರಷ್ಣನ್ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ತಮ್ಮ ಅಧಿಕಾರಾವಧಿಯಲ್ಲಿ ದೇಶದ ಏಳಿಗೆಗಾಗಿ ಅವಿರತ ದುಡಿದರು.
 ಭಾರತೀಯ ಶಿಕ್ಷಣಕ್ಕೆ ಒಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ ,ತತ್ವ ಜ್ಞಾನ , ದೇಶದ ಅಭಿವ್ರದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಡಾ। ರಾಧಾಕ್ರಷ್ಣನ್ ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ . ಓರ್ವ ಶ್ರೇಷ್ಟ ಶಿಕ್ಷಣ ತಜ್ಞ ರಾಗಿದ್ದ ಅವರ ಜನ್ಮದಿನವಾದ ಸೆಪ್ಟಂಬರ್ 5 ನ್ನು ಶಿಕ್ಷಕ ದಿನವಾಗಿ ಆಚರಿಸುತ್ತಾರೆ. ಶಿಕ್ಷಣದ ಬಗ್ಗೆ ಅಪಾರ ಚಿಂತನೆಹೊಂದಿದ್ದ ಅವರು ಶಿಕ್ಷಕರ ಬಗ್ಗೆ ಹೆಚ್ಚಿನ ಗೌರವಹೊಂದಿದ್ದರು . ಪ್ರತಿಯೊಬ್ಬ ಶಿಕ್ಷಕರೂ ಉದಾತ್ತ ಮೌಲ್ಯಗಳನ್ನಾಧರಿಸಿದ ಉನ್ನತ ವ್ಯಕ್ತಿತ್ವವನ್ನು ಪಡೆಯಬೇಕು ಎಂಬುದಾಗಿ ಹೇಳುತ್ತಿದ್ದರು.
   ಗುರುವಿನ ಸ್ಥಾನ ಮತ್ತು ಪ್ರಭಾವ ಬಹಳ ಮಹತ್ವವಾದದ್ದು. ಹಾಗೂ ಮಹಾ ಪವಿತ್ರವಾದದ್ದು. ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸ, ಸುಪ್ತ ಪ್ರತಿಭೆ ಹೊರಹೊಮ್ಮುವಿಕೆಯ ಕ್ರಿಯೆ ಸಮರ್ಪಕವಾಗಿ ಆಗುವುದರಲ್ಲಿ ಶಿಕ್ಷಕರ ಪಾತ್ರ ಗಮನಾರ್ಹವಾದುದಾಗಿದೆ. ಜ್ಞಾನ ಮತ್ತು ಅದನ್ನು ವಿದ್ಯಾರ್ಥಿಗಳ ಹಿತಕ್ಕಾಗಿ ಹೇಳಿಕೊಡುವ ಆಸಕ್ತಿ ಹಾಗೂ ಶ್ರದ್ಧೆ ಇವುಗಳು ಶಿಕ್ಷಕರಲ್ಲಿ ಇರಬೇಕಾದ ಎರಡು ಪ್ರಮುಖ ಅಂಶಗಳಾಗಿವೆ. ಭಾರತೀಯ ಸಂಸ್ಕ್ರತಿಯ ಒಳ್ಳೆಯ ಅಂಶಗಳನ್ನು, ಜಾತ್ಯಾತೀತ ಭಾವನೆಯನ್ನು , ವೈಜ್ಞಾನಿಕ ಮನೋಭಾವ, ರಾಷ್ಟ್ರಪ್ರೇಮವನ್ನು ಬಿತ್ತಿ ಬೆಳೆಸಬೇಕು.ಕಾಯಾ ವಾಚಾ ಮನಸಾ ನಿಷ್ಠೆಯಿಂದ  ಇದ್ದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಬೇಕು. 

Wednesday, September 3, 2014

ONAM SPECIAL 5 Kg Rice to Students

ಓಣಂ ಹಬ್ಬದ ಪ್ರಯುಕ್ತ 5 ಕಿಲೋ ಅಕ್ಕಿ :
ಮಧ್ಯಾಹ್ನ ಬಿಸಿಯೂಟ ಯೋಜನೆಗೊಳಪಟ್ಟ ಎಲ್ಲಾ ಮಕ್ಕಳಿಗೂ ಓಣಂ ಹಬ್ಬದ ಪ್ರಯುಕ್ತ 5 ಕಿಲೋ ಅಕ್ಕಿಯನ್ನು ವಿತರಿಸಬೇಕೆಂದು   ಸೆಪ್ಟಂಬರ್ 1 ರಂದು ಹೊರಡಿಸಿದ ಸುತ್ತೋಲೆಯಲ್ಲಿ (Circular No:NM 3/52833/2014/DPI, Office of the DPI dated:1.9.2014) ತಿಳಿಸಲಾಗಿದೆ. ಅರ್ಹರಾದ UID/EID  ಇರುವ ಎಲ್ಲಾ ಮಕ್ಕಳಿಗೆ ಸೆಪ್ಟಂಬರ್ 5 ರ ಮೊದಲು ಮಾವೇಲಿ ಸ್ಟೋರುಗಳಿಂದ ಅಕ್ಕಿಯನ್ನು ತಂದು ವಿತರಿಸಬೇಕು. UID/EID  ಇಲ್ಲದ ಮಕ್ಕಳಿಗೆ ಅವರ ರಕ್ಷಕರ ಮತದಾನದ ಗುರುತು ಚೀಟಿ ಅಥವಾ ರೇಶನ್ ಕಾರ್ಡನ್ನು ಪರಿಶೀಲಿಸಿ ಪಲಾನುಭಾವಿಗಳೆಂದು ಖಚಿತ ಪಡಿಸಬೇಕು. ಮಕ್ಕಳ UID/EID /Ration Card/Election ID  ಗಳ ನಂಬರನ್ನು ಅಕ್ಕಿ ವಿತರಿಸುವ ರಜಿಸ್ಟರಿನಲ್ಲಿ ದಾಖಲಿಸಬೇಕು. ವಿತರಿಸಿದ ಅಕ್ಕಿಯ ಲೆಕ್ಕಾಚಾರವನ್ನು ಸಂಬಂಧಪಟ್ಟ ಪಂಚಾಯತು ಸದಸ್ಯರಿಗೂ, ಪಿ.ಟಿ.ಎ. ಅಧ್ಯಕ್ಷರಿಗೂ ತಿಳಿಸಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

Onam Exam 2014-New dates for postponed exams


ಮುಂದೂಡಲ್ಪಟ್ಟ ಓಣಂ ಪರೀಕ್ಷೆಗಳ ನೂತನ ವೇಳಾಪಟ್ಟಿ :
ವಿವಿಧ ಕಾರಣಗಳಿಂದಾಗಿ ಮುಂದೂಡಲ್ಪಟ್ಟ  ಓಣಂ ಪರೀಕ್ಷೆಗಳ ಹೊಸ ವೇಳಾಪಟ್ಟಿ ಪ್ರಕಟವಾಗಿದೆ. ಅದರ ಪ್ರಕಾರ  ಅಗೊಸ್ತು 26 ರ ಪರೀಕ್ಷೆ ಸೆಪ್ಟಂಬರ್ 17 ರಂದು, ಸೆಪ್ಟಂಬರ್ 2 ರ ಪರೀಕ್ಷೆ ಸೆಪ್ಟಂಬರ್ 18 ರಂದು ಮತ್ತು ವಿನಾಯಕ ಚತುರ್ಥಿಯ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಮುಂದೆ ಹಾಕಿದ ಅಗೋಸ್ತು 29 ರ ಪರೀಕ್ಷೆ  ಸೆಪ್ಟಂಬರ್ 5 ರ ಬದಲು ಸೆಪ್ಟಂಬರ್ 19 ರಂದು ನಡೆಯಲಿದೆ.

Tuesday, September 2, 2014

Sept 2 - World Coconut Day

ಇಂದು ( ಸೆಪ್ಟಂಬರ್ 2)ವಿಶ್ವ  ನಾರಿಕೇಳ (ತೆಂಗು) ದಿನ :
ಪ್ರಪಂಚದಲ್ಲಿ  ಸುಮಾರು  ತೊಂಬತ್ತಕ್ಕಿಂತಲೂ ಹೆಚ್ಚು ದೇಶಗಳಲ್ಲಿ  ತೆಂಗನ್ನು  ಬೆಳೆಸುತ್ತಾರೆ.  ಆದರೆ ತೆಂಗಿನ ಹೆಸರು ಹೊಂದಿರುವ ರಾಜ್ಯವು ಕೇರಳವಾಗಿದೆ. ಕೇರ ವ್ರಕ್ಷಗಳ ನಾಡು  ಕೇರಳವಾಗಿದೆ. ತೆಂಗಿನ ಮರವು ಸಾಮಾನ್ಯವಾಗಿ ಕರಾವಳಿ ತೀರಗಳಲ್ಲಿ  ಬೆಳೆಯುತ್ತವೆ. ತೆಂಗಿನ ಮರದ ಪ್ರತಿಯೊಂದು ಭಾಗವು  ಪ್ರಯೋಜನಕಾರಿಯಾದ  ಕಾರಣ   ಅದನ್ನು ಕಲ್ಪವ್ರಕ್ಷ ಎಂದು ಕರೆಯುತ್ತಾರೆ. ತೆಂಗನ್ನು  ತಮಿಳಿನಲ್ಲಿ ತೆನ್ನೈ , ಮಲಯಾಳದಲ್ಲಿ  ತೆಂಗ್ , ತೆಲುಗಿನಲ್ಲಿ ತೆಂಗಾಯ , ಹಿಂದಿಯಲ್ಲಿ ನಾರಿಯಲ್ ಎಂದು ಕರೆಯುತ್ತಾರೆ. ಇದರ  ವೈಜ್ಞಾನಿಕ ಹೆಸರು ಕೊಕೋಸ್ ನ್ಯುಸಿಫೆರ . ತೆಂಗಿನ ಮರವು ನಮ್ಮ ರಾಜ್ಯದ ವ್ರಕ್ಷವಾಗಿದೆ.
 ಇಂಡೋನೀಶ್ಯದ ಜಕಾರ್ತ ಆಸ್ಥಾನವಾಗಿರುವ ಏಶ್ಯನ್  ಏಂಡ್ ಫೆಸಿಫಿಕ್ ಕೋಕನಟ್ ಕಮ್ಮ್ಯುನಿಟಿ (APCC) ಎಂಬ ಅಂತಾರಾಷ್ಟ್ರೀಯ  ಸಂಸ್ಥೆ ಯು ವಿಶ್ವ ನಾರಿಕೇಳ ದಿನಾಚರಣೆಯನ್ನು ಹುಟ್ಟುಹಾಕಿತು. ಈ ಸಂಸ್ಥೆಯು  ಯುಕ್ತ ರಾಷ್ಟ್ರ ಸಂಘದ ಏಶ್ಯಾ ಫೆಸಿಫಿಕ್ ಅಭಿವ್ರದ್ಧಿಯ ಸಂರಕ್ಷಣೆಯಲ್ಲಿದೆ . 2009 ಸೆಪ್ಟಂಬರ್ 2 ರಿಂದ ವಿಶ್ವ ನಾರಿಕೇಳ ದಿನವನ್ನು ಆಚರಿಸಲು ಪ್ರಾರಂಭಿಸಿದರು . ತೆಂಗಿನ ಪ್ರಾಧಾನ್ಯತೆಯ ಬಗ್ಗೆ ತಿಳುವಳಿಕೆ ಮೂಡಿಸುವುದು, ತೆಂಗಿನ ಕೈಗಾರಿಕೆ ಮತ್ತು ಉತ್ಪನ್ನಗಳ ಪ್ರಚಾರ ಹಾಗೂ ಪ್ರೋತ್ಸಾಹಿಸುವುದು , ಮಾನವನ ಜೀವನದ ವಿಕಾಸದಲ್ಲಿ ತೆಂಗಿನೊಂದಿಗಿರುವ ಸಂಬಂಧದ ಕುರಿತು ತಿಳಿಯುವುದು ಮೊದಲಾದುವುಗಳು  ವಿಶ್ವ ನಾರಿಕೇಳ ದಿನಾಚರಣೆಯ ಉದ್ದೇಶಗಳಾಗಿವೆ.

Monday, September 1, 2014

Harthal in Kerala:Govt.Declared Holiday

FLASH NEWS: ನಾಳೆ (2.9.2014) ಕೇರಳದಲ್ಲಿ  ಆರ್.ಎಸ್.ಎಸ್. ಹರತಾಳ : ವಿದ್ಯಾಲಯಗಳಿಗೆ ಸರಕಾರ ರಜೆ ಘೋಷಿಸಿದೆ
ಕಣ್ಣೂರಿನಲ್ಲಿ ಆರ್.ಎಸ್.ಎಸ್.ಕಾರ್ಯಕರ್ತನನ್ನು ಬರ್ಬರವಾಗಿ ಇರಿದು ಕೊಲೆಗೈದುದನ್ನು ಪ್ರತಿಭಟಿಸಿ ಆರ್.ಎಸ್.ಎಸ್ ನಾಳೆ ಕೇರಳದಲ್ಲಿ ಹರತಾಳಕ್ಕೆ ಕರೆ ನೀಡಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಹರತಾಳ ನಡೆಯಲಿದೆ. ಆದರೆ ಗಣೇಶೋತ್ಸವದ ಭಾಗವಾಗಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳನ್ನು ಹರತಾಳದಿಂದ ಹೊರತುಪಡಿಸಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ರಜೆ ಘೋಷಿಸಿದೆ . 

First Term Evaluation Started

ಟರ್ಮ್ ಮೌಲ್ಯಮಾಪನ ಪ್ರಾರಂಭ :
 ಯು.ಪಿ. ತರಗತಿಗಳಲ್ಲಿ ಮೊದಲ ಹಂತದ ಮೌಲ್ಯಮಾಪನವು 28.8.2014 ರಂದು ಪ್ರಾರಂಭವಾಯಿತು. ಇಂದು  (1.9.2014) ಎಲ್.ಪಿ. ತರಗತಿಯ ಮಕ್ಕಳಿಗೆ ಪರೀಕ್ಷೆ ಆರಂಭವಾಯಿತು.
ನಮ್ಮ ಶಾಲೆಯಲ್ಲಿ ಜರಗಿದ  ವಿವಿಧ ದಿನಾಚರಣೆಗಳಿಗೆ ಸಂಬಂಧಿಸಿದ ವೀಡಿಯೋಗಳನ್ನು ಗ್ಯಾಲರಿಯಲ್ಲಿ ನೋಡಿರಿ.
Click Gallery for more pictures and vedios of various activities of our school