FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, November 9, 2015

DEEPAVALI

ಅಸತೋಮಾ ಸದ್ಗಮಯ 
ತಮಸೋಮಾ ಜ್ಯೋತಿರ್ಗಮಯ 
ಮ್ರತ್ಯೋರ್ಮಾ ಅಮ್ರತಂಗಮಯ 
ಓಂ  ಶಾಂತಿ : ಶಾಂತಿ : ಶಾಂತಿ : ।।
                   ಅಜ್ನಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ನಾನವೆಂಬ  ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು . ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ . ದೀಪ + ಆವಳಿ ಎಂದರೆ, ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ . ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ . ದೀಪಾವಳಿಗೆ ಕೌಮುದಿ ಉತ್ಸವ ಎಂದೂ  ಕರೆಯುವುದುಂಟು . 
          ಇದು ಕಾರ್ತಿಕ ಮಾಸದ ಹಬ್ಬವೇ ಆದರೂ ಆಶ್ವೀಜ ಕ್ರಷ್ಣ ತ್ರಯೋದಶಿ ಸಂಜೆಯಿಂದಲೇ ದೀಪಾವಳಿಯ ಸಂಭ್ರಮ . ದೀಪಾವಳಿ ಮೂರು ದಿನಗಳ ಹಬ್ಬವಾದರೂ ಸತತ ಐದು ದಿನಗಳ ಸಡಗರ. ತ್ರಯೋದಶಿಯ ಸಂಜೆ ಸ್ನಾನದ ಮನೆಯನ್ನು ಚೆನ್ನಾಗಿ ಶುದ್ಧ ಮಾಡಿ ಹಂಡೆಗೆ ಸುಣ್ಣ ಹಾಗೂ ಕೆಮ್ಮಣ್ಣು ಬಳಿದು , ರಂಗವಲ್ಲಿ ಹಾಕಿ ಶುಚಿಯಾದ ನೀರು ತುಂಬುತ್ತಾರೆ . ಇದಕ್ಕೇ ಈ ಹಬ್ಬಕ್ಕೆ ನೀರು ತುಂಬುವ ಹಬ್ಬ ಎಂದೇ ಹೆಸರು ಬಂದಿದೆ . ಮಾರನೇ ದಿನ ನರಕ ಚತುರ್ದಶಿ ಅಂದು ಎಲ್ಲರೂ  ನಸುಕಿನಲ್ಲಿ ಎದ್ದು ತೈಲಾಭ್ಯಂಜನ ಮಾಡಿ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ . ಅಂದು ಸೂರ್ಯೋದಯದ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾ ಸ್ನಾನಕ್ಕೆ ಸಮ ಎಂಬುದು ಹಿರಿಯರ ನಂಬಿಕೆ . 
       ಪುರಾಣಗಳ ಪ್ರಕಾರ ನರಕಾಸುರನೆಂಬ ರಾಕ್ಷಸನು ಲೋಕಕಂಟಕನಾದಾಗ ಭೂಮಾತೆ ಕ್ರಷ್ಣನನ್ನು ಪ್ರಾರ್ಥಿಸಿ ನರಕಾಸುರನ ಸಂಹಾರಕ್ಕೆ ಕಾರಣಳಾಗುತ್ತಾಳೆ . ಕ್ರಷ್ಣ ಕೂಡ ನರಕಾಸುರನ ಸಂಹಾರಕ್ಕೆ ಮುನ್ನ ಆಶ್ವಯುಜ ಕ್ರಷ್ಣ ಚತುರ್ದಶಿಯ ದಿನ ತೈಲಾಭ್ಯಂಜನ ಮಾಡಿ , ನರಕಾಸುರನ ವಧಿಸಿ , ಆ ರಾಕ್ಷಸ  ಬಂಧಿಸಿ ಇಟ್ಟಿದ್ದ ಹದಿನಾರು ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸುತ್ತಾನೆ. ಆ ನೆನಪಿಗಾಗಿ ದೀಪಾವಳಿಯ ಆಚರಣೆ. 
        ಈ ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುವ ಹಬ್ಬವೇ ದೀಪಾವಳಿ . ಹೀಗಾಗಿಯೇ ಅಂದು ಹಬ್ಬದ ಊಟ ಮಾಡಿ , ಬಾಣ ಬಿರುಸು ಹಚ್ಚಿ ನಲಿಯುವುದು ವಾಡಿಕೆ. ತಮ್ಮ ಬಿಡುಗಡೆಯ ಬಳಿಕ ಕ್ರಷ್ಣನಿಗೆ ಕ್ರತಜ್ನತೆ ಅರ್ಪಿಸಲು ಹದಿನಾರು ಸಾವಿರ ಕನ್ಯೆಯರು ಭಕ್ತಿಯಿಂದ ಸಾಲು ಸಾಲು ಆರತಿ ಬೆಳಗಿದರೆಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಅಂದಿನಿಂದ ಮಹಿಳೆಯರು  ಆರತಿ ಬೆಳಗುವ , ಸಾಲು ದೀಪ ಹಚ್ಚುವ , ತೈಲಾಭ್ಯಂಜನ ಮಾಡುವ ಪದ್ಧತಿ ರೂಢಿಗೆ ಬಂತು . ಮಾರನೆಯ ದಿನ ಅಮಾವಾಸ್ಯೆ. ಅಂದು ಸಂಜೆ ಎಲ್ಲರೂ ಧನದೇವತೆಯಾದ ಲಕ್ಷ್ಮಿ ಯನ್ನು ಪೂಜಿಸುತ್ತಾರೆ. ಅಂದು ಮನೆಯಲ್ಲಿರುವ ಹಣವನ್ನೂ, ಸುವರ್ಣವನ್ನೂ ಕಳಶದ ಜೊತೆ ಇಟ್ಟು ಧನದೇವತೆಯಾದ ಲಕ್ಷ್ಮಿಯನ್ನು ಪೂಜಿಸಿ , ಉತ್ತರೋತ್ತರ ಅಭಿವ್ರದ್ಧಿ ಮಾಡುವಂತೆ  ಪ್ರಾರ್ಥಿಸುತ್ತಾರೆ. ಅಂಗಡಿಗಳಲ್ಲೂ ಲಕ್ಷ್ಮೀ ಪೂಜೆ ವಿಜೃಂಭಣೆ ಯಿಂದ  ನಡೆಯುತ್ತದೆ. 
      ಕಾರ್ತಿಕ ಮಾಸದ ಮೊದಲ ದಿನವೇ ಪಾಡ್ಯ. ಅಂದು ಬಲಿ ಪಾಡ್ಯಮಿ . ಬಲಿ ಚಕ್ರವರ್ತಿಯು ತನ್ನ ತಪೋಬಲ ಹಾಗೂ ಭುಜಬಲದಿಂದ ದೇವೇಂದ್ರನನ್ನು ಸೋಲಿಸಿ ಸುರಲೋಕವನ್ನು ವಶಪಡಿಸಿಕೊಂಡು ಗರ್ವಿಷ್ಟನಾಗಿ ಮೆರೆಯುತ್ತಿದ್ದಾಗ  ಶ್ರೀಮನ್ನಾರಾಯಣನು ವಾಮನನಾಗಿ ಅವತರಿಸಿ , ಮೂರಡಿ ಜಾಗವನ್ನು  ಬಲಿಯ ಬಳಿಯಿಂದ ದಾನವಾಗಿ ಪಡೆದು, ತ್ರಿವಿಕ್ರಮನಾಗಿ ಬೆಳೆದು ಆಕಾಶ ಭೂಮಿಗಳನ್ನು ಎರಡಡಿಯಲ್ಲಿ ಅಳೆದು ಮತ್ತೊಂದಡಿಯನ್ನು ಬಲಿಯ ತಲೆಯಮೇಲಿಟ್ಟು ಪಾತಾಳಕ್ಕೆ ತುಳಿಯುತ್ತಾನೆ. ಆದರೆ ಕೇಳಿದೊಡನೆಯೇ ಅಸುರಗುರು ಶುಕ್ರಾಚಾರ್ಯರ ಮಾತನ್ನೂ ಮೀರಿ ದಾನ ಮಾಡುವ ದಾನಶೂರನಾದ ಬಲಿ , ಶ್ರೀಮನ್ನಾರಾಯಣನ ಕ್ರಪೆಗೂ ಪಾತ್ರನಾಗುತ್ತಾನೆ. ಪ್ರತಿವರ್ಷ ಕಾರ್ತಿಕ ಮಾಸದ ಮೊದಲ ದಿನ ಸಂಜೆ ಬಲಿಂದ್ರ ಭೂಲೋಕಕ್ಕೆ ಬಂದು ಮೂರು ಮುಕ್ಕಾಲು ಗಳಿಗೆ ಇರುತ್ತಾನೆ ಎಂಬುದು ಪ್ರತೀತಿ. ಹೀಗಾಗಿ ಅಂದು ಸಂಧ್ಯಾ ಕಾಲದಲ್ಲಿ ಬಲಿಂದ್ರ ಪೂಜೆ ಮಾಡಲಾಗುತ್ತದೆ. ಕಾರ್ತಿಕ ಪಾಡ್ಯದಿಂದ ಹಿಂದೂಗಳು ಮನೆಯ ಬಾಗಿಲಲ್ಲಿ ಹಾಗೂ ತುಳಸಿಯ ಮುಂದೆ ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. 
      ಕಾರ್ತಿಕದಲ್ಲಿ ಈ ರೀತಿ ದೀಪ ಹಚ್ಚಿಡುವುದರಿಂದ, ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಕಾರ್ತಿಕದಲ್ಲಿ ಹಚ್ಚಿಟ್ಟ ಜ್ಯೋತಿ ಬೆಳಕು ತೋರುತ್ತದೆ ಎಂಬುದು ಜನಪದರ ನಂಬಿಕೆ . ಕಾರ್ತಿಕ ಪಾಡ್ಯದಂದು ಶ್ರೀಕ್ರಷ್ಣನು  ಕುಂಭ ದ್ರೋಣದಿಂದ ಗೋಕುಲವನ್ನು ಗೋಪಾಲಕರನ್ನೂ ರಕ್ಷಿಸಲು ಗೋವರ್ಧನಗಿರಿಯನ್ನು ಎತ್ತಿದ್ದು. ಹೀಗಾಗಿ ಅಂದು ಗೋಪಾಲನಿಗೆ ಕ್ರತಜ್ನತೆ ಸಲ್ಲಿಸಲು ಗೋವುಗಳ ಪೂಜೆ ನಡೆಯುತ್ತದೆ. 
         ತಾನೇ ಉರಿದರೂ ಊರಿಗೆ ಬೆಳಕು ನೀಡುವ ಪರಂಜ್ಯೋತಿಯನ್ನು ನೋಡುತ್ತಾ ಮನುಷ್ಯ ಸ್ವಾರ್ಥವನ್ನು ಮರೆತು ತಾನೂ ಜ್ಯೋತಿಯಂತೆ ಇತರರಿಗೆ ನೆರವಾಗಲಿ ಎಂಬುದು ಕಾರ್ತಿಕದ ಮಹತ್ವದ ಉದ್ದೇಶ . ಇದುವೇ ಈ ಹಬ್ಬದ ಅಂತರಾರ್ಥ . ಎಲ್ಲರಿಗೂ ಈ ಬೆಳಕಿನ ಹಬ್ಬವು ಸುಖ ಶಾಂತಿ ಸಮ್ರದ್ಧಿಯನ್ನು  ನೀಡಲಿ ಎಂದು ಹಾರೈಸುತ್ತೇವೆ.

No comments:

Post a Comment